Karnataka Home - ಕನ್ನಡ - ಪ್ರಜಾವಾಣಿ - ಹುಬ್ಬಳ್ಳಿಗೆ ಬಂತು ಏರ್‌ ಇಂಡಿಯಾ ವಿಮಾನ

ಹುಬ್ಬಳ್ಳಿಗೆ ಬಂತು ಏರ್‌ ಇಂಡಿಯಾ ವಿಮಾನ


21 July 2016 11:16

ಹುಬ್ಬಳ್ಳಿ: ಬೆಂಗಳೂರು–ಹುಬ್ಬಳ್ಳಿ ನಡುವೆ ಹೊಸದಾಗಿ ಸಂಚಾರ ಆರಂಭಿಸಿದ ಏರ್‌ ಇಂಡಿಯಾ ವಿಮಾನಕ್ಕೆ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಬುಧವಾರ ಅದ್ಧೂರಿ ಸ್ವಾಗತ ನೀಡಲಾಯಿತು. ಸಂಜೆ 4.57ಕ್ಕೆ ಭೂಸ್ಪರ್ಶ ಮಾಡಿದ ಈ ವಿಮಾನಕ್ಕೆ ಜಲ ಫಿರಂಗಿಗಳ ಮೂಲಕ ಜಲ ಸಿಂಚನ ಮಾಡಿ ಸ್ವಾಗತ ಕೋರಲಾಯಿತು.

ವಿಮಾನದಿಂದ ಇಳಿದ ಪ್ರಯಾಣಿಕರಿಗೆ ಗಗನಸಖಿಯರು ಹೂಗುಚ್ಛ ನೀಡಿ ಬರಮಾಡಿಕೊಂಡರು. ಏರ್‌ ಇಂಡಿಯಾ ಸಂಸ್ಥೆಯ ಅಧಿಕಾರಿಗಳು, ನಾಲ್ವರು ಸಿಬ್ಬಂದಿ ಹಾಗೂ 39 ಪ್ರಯಾಣಿಕರು ಇದರಲ್ಲಿ ಇದ್ದರು.

ಬಳಿಕ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಯಾಣಿಕರಿಗೆ ಸಿಹಿ ಹಂಚುವ ಮೂಲಕ ಬೆಂಗಳೂರು ಪ್ರಯಾ ಣಕ್ಕೆ ಶುಭ ಕೋರಲಾಯಿತು. ವಿಮಾನ ಸಂಜೆ 6.40ಕ್ಕೆ 42 ಪ್ರಯಾಣಿಕರೊಂದಿಗೆ ಬೆಂಗಳೂರಿಗೆ ಪ್ರಯಾಣಿಸಿತು. ಈ ಸಂದರ್ಭ ದಲ್ಲಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್‌. ಸುಬ್ಬಯ್ಯ, ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೊಹಾನಿ ಮತ್ತಿತರರು ಹಾಜರಿದ್ದರು.

‘ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಏರ್‌ ಇಂಡಿಯಾ ವಿಮಾನ ಹಾರಾಟ ನಡೆಸಲಿದೆ. ಮಧ್ಯಾಹ್ನ 3.45ಕ್ಕೆ ಬೆಂಗಳೂರಿನಿಂದ ಹೊರಡಲಿರುವ ವಿಮಾನ ಸಂಜೆ 5.05ಕ್ಕೆ ಹುಬ್ಬಳ್ಳಿಗೆ ಬರಲಿದೆ. ಸಂಜೆ 5.25ಕ್ಕೆ ಇಲ್ಲಿಂದ ಹೊರಟು ಸಂಜೆ 6.45ಕ್ಕೆ ಬೆಂಗಳೂರು ತಲುಪಲಿದೆ. ಇದರಲ್ಲಿ 48 ಆಸನಗಳ ವ್ಯವಸ್ಥೆ ಇದ್ದು, 15 ದಿನ ಮೊದಲು ಟಿಕೆಟ್‌ ಕಾಯ್ದಿರಿಸಿದರೆ ಹುಬ್ಬಳ್ಳಿ–ಬೆಂಗಳೂರು ನಡುವಿನ ಪ್ರಯಾಣ ದರ ₹ 1,902 ಇರುತ್ತದೆ’ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಶಿವಾನಂದ ಬೇನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೀಘ್ರದಲ್ಲೇ ಪ್ರತಿದಿನ ಬೆಂಗಳೂರು– ಹುಬ್ಬಳ್ಳಿ ನಡುವೆ ಹಾಗೂ ಮುಂಬೈ– ಹುಬ್ಬಳ್ಳಿ ನಡುವೆ ಸಂಚಾರ ಆರಂಭಿಸುವ ಕುರಿತು ಏರ್ ಇಂಡಿಯಾ ಚಿಂತನೆ ನಡೆಸಿದೆ’ ಎಂದು ಅವರು ಹೇಳಿದರು.

.
ಹುಬ್ಬಳ್ಳಿಗೆ ಬಂತು ಏರ್‌ ಇಂಡಿಯಾ ವಿಮಾನ. This article is published at 21 July 2016 11:16 from Prajavani kannada Newspaper, click on the read full article link below to see further details.


Read Full Article on ಪ್ರಜಾವಾಣಿ >>

Tags : ಹುಬ್ಬಳ್ಳಿಗೆ, ಬಂತು, ಏರ್‌, ಇಂಡಿಯಾ, ವಿಮಾನ


Share